Skip to content Skip to footer

ಪರಂಪರೆಯ ಪಥದಲ್ಲಿ

ಪರಮಾರ್ಥದ ಪಯಣ...

Full Video on youtube

ಸ್ವರ್ಣಗೌರಿ ವ್ರತದ ಸಂಪೂರ್ಣ ವಿಧಾನ ತಿಳಿದು ಪೂಜಿಸಿ ಕೃತಾರ್ಥರಾಗೋಣ

In Hindu tradition, Lord Ganesha, Lord Shiva, and Lord Hanuman are widely believed to grant swift blessings to sincere devotees. Lord Ganesha is worshipped first to remove all obstacles, while Lord Shiva is known as Ashutosh, meaning one who is easily pleased by pure devotion.

Audio Clips

Text Version

ಶ್ರೀ ಗುರುಭ್ಯೋ ನಮಃ ಹರಾನ್ವಿತಾಂ ಇಂದುಮುಖೀಂ ಸರ್ವಾಭರಣ ಭೂಷಿತಾಂ ವಿಮಲಾಂಗೀಂ ವಿಶಾಲಾಕ್ಷೀಂ ಚಿಂತಯಾಮಿ ಸತೀಂ ಶಿವಾಂ. ಪ್ರತಿ ಭಾದ್ರಪದ ಮಾಸದಲ್ಲಿ ತದಿಗೆಯ ದಿವಸ ಸ್ವರ್ಣಗೌರಿ ಅಮ್ಮನವರ ವ್ರತವನ್ನು, ಚತುರ್ಥಿಯ ದಿವಸ ವರಸಿದ್ಧಿ ವಿನಾಯಕ ಸ್ವಾಮಿ ವ್ರತವನ್ನು ಆಚರಣೆ ಮಾಡಿಕೊಂಡು ನಾವೆಲ್ಲ ಬಂದಿದ್ದೇವೆ. ಈ ಸ್ವರ್ಣಗೌರಿ ವ್ರತದ ಪೂಜಾ ವಿಧಿ ಮತ್ತು ವಿಧಾನ, ಸ್ವರ್ಣಗೌರಿ ಅಮ್ಮನವರಿಗೆ ಯಾವ ರೀತಿಯಾಗಿ ಪೂಜೆಯನ್ನು ನಾವು ಸಲ್ಲಿಸಬೇಕು ಅಂತಕ್ಕಂತದ್ದನ್ನು ಇವತ್ತಿನ ಸಂಚಿಕೆಯಲ್ಲಿ ಕ್ಲುಪ್ತವಾಗಿ ನೋಡೋಣ. ಹಿಂದಿನ ಸಂಚಿಕೆಗಳಲ್ಲಿ ಹಲವು ದೇವರ ವ್ರತವನ್ನು ನಾನು ಹೇಳಿದ ರೀತಿಯಲ್ಲೇ ಬೆಳಗ್ಗೆ ಸ್ನಾನಾದಿಗಳನ್ನು ಮಾಡಿಕೊಂಡು ಪರಿಶುಭ್ರವಾದ ವಸ್ತ್ರವನ್ನು ಧರಿಸಿ ಪೂಜಾ ಮಂದಿರ ಅಥವಾ ಪೂಜಾ ಮಾಡುವ ಸ್ಥಳದಲ್ಲಿ ನೆಲವನ್ನು ಅತ್ಯಂತ ಶುಚಿಯಾಗಿ ಮಾಡಿ ದೀಪಾದಿಗಳ ಆರಾಧನೆಯನ್ನು ಎಲ್ಲದಕ್ಕೂ ಸರ್ವೇಸಾಮಾನ್ಯ, ಅದೆಲ್ಲ ಗೊತ್ತಾದಕ್ಕೆ ಅದರ ವಿಚಾರ ಮಾತಾಡ್ತಿಲ್ಲ. ಅಮ್ಮನವರ ವಿಗ್ರಹವನ್ನು ಇಡತಕ್ಕಂತಹ ಒಂದು ಪ್ರತೀತಿ ನಮ್ಮಲ್ಲಿ ಉಂಟು. ಎಲ್ಲಿ ಸ್ವರ್ಣಗೌರಿ ಅಮ್ಮನವರು? ಸ್ವರ್ಣಗೌರಿ ಅಮ್ಮನವರ ಪೂಜಾ ವ್ರತದಲ್ಲಿ ಅತ್ಯಂತ ಪ್ರಮುಖವಾಗಿರತಕ್ಕಂತದ್ದು ಮಣ್ಣಿನ ಸ್ವರ್ಣಗೌರಿ ಅಂತಕ್ಕಂತದ್ದು ಕೆಲವರ ಒಂದು ಮತ, ಅವರ ಸಂಪ್ರದಾಯ. ಕೆಲವರಲ್ಲಿ ಅವರ ಮನೆಯಲ್ಲಿ ಅನಾದಿಕಾಲದಿಂದ ಪೂಜಿಸಿಕೊಂಡು ಬಂದಿರತಕ್ಕಂತಹ ಕಾಷ್ಟಮಯವಾದ ಮರದಿಂದ ಮಾಡಿರ್ತಕ್ಕಂತಹ ಸ್ವರ್ಣಗೌರಿ ವಿಗ್ರಹ ಕೂಡ ನೋಡಲಿಕ್ಕೆ ಸಿಗುತ್ತೆ. ಕೆಲವರು ಏನು ಮಾಡ್ತಾರೆ ಅಂದ್ರೆ ಕಲಶ ಇಟ್ಟು ಕಲಶದ ಮೇಲೆ ತೆಂಗಿನಕಾಯಿ ಬದಲಾಗಿ ಒಂದು ಬಟ್ಟೆಯಲ್ಲಿ, ಶುಭ್ರವಾಗಿರತಕ್ಕಂತ ಬಟ್ಟೆಯಲ್ಲಿ ಮರಳನ್ನು ತುಂಬಿ ಅದನ್ನು ಉಂಡೆ ಮಾಡಿ ಅದಕ್ಕೆ ಕಣ್ಣು, ಮೂಗು ಇತ್ಯಾದಿಗಳನ್ನು ಮಾಡಿ ಅದನ್ನು ಇಟ್ಟು ಪೂಜೆ ಮಾಡತಕ್ಕಂತಹ ಪದ್ಧತಿಗಳು ಕೆಲವರಲ್ಲಿ ಇದೆ. ನಾನು ಹೇಳಿದ ತಕ್ಷಣಕ್ಕೆ ನಿಮ್ಮ ಸಂಪ್ರದಾಯ ಅಲ್ಲದೆ ಇರತಕ್ಕಂತ ಪೂಜಾ ವಿಧಿಯನ್ನು ದಯವಿಟ್ಟು ಮಾಡಬೇಡಿ. ಅನಾದಿಕಾಲದಿಂದ ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಈ ರೀತಿ ಪೂಜೆಯನ್ನು ಮಾಡಿಕೊಂಡು ಬಂದಿರತಕ್ಕಂತದ್ದೇ ಅದನ್ನೇ ಮಾಡತಕ್ಕಂತದ್ದು ಅತ್ಯಂತ ಶುಭದಾಯಕ ಮತ್ತು ಪ್ರಶಸ್ತ. ಇಲ್ಲಿ ಇನ್ನೊಂದು ವಿಚಾರವನ್ನು ನಾನು ಹೇಳಲಿಕ್ಕೆ ಬಯಸುತ್ತೇನೆ. ಮೃಣ್ಮಯವಾದ ಮಣ್ಣಿನಿಂದ ಮಾಡಿದಂತಹ ಸ್ವರ್ಣಗೌರಿಯನ್ನು ಇಟ್ಟು ನೀರಿನಲ್ಲಿ ವಿಸರ್ಜನೆ ಮಾಡತಕ್ಕಂತಹ ಪದ್ಧತಿ ಇಲ್ಲ. ಹೇಳಿಲ್ಲ ಶಾಸ್ತ್ರಕಾರರು. ಪ್ರಸಿದ್ಧ ವಿನಾಯಕ ವ್ರತಕ್ಕೂ ಇಲ್ಲ, ಸ್ವರ್ಣಗೌರಿಗೂ ಇಲ್ಲ. ಅದರ ಯೋಗಾರ್ಥವನ್ನು ನಾನು ಪ್ರಸಿದ್ಧ ವಿನಾಯಕ ವ್ರತದ ಸಂಚಿಕೆಯಲ್ಲಿ ನಿಮಗೆ ತಿಳಿಸುತ್ತೇನೆ. ಸದ್ಯಕ್ಕೆ ಸ್ವರ್ಣಗೌರಿ ಅಮ್ಮನವರ ಪೂಜೆಯನ್ನು ಮಾಡಬೇಕಾದರೆ ಭಾವನೆಗಾಗಿ ಏನು ಮಾಡಿ, ಒಂದು ಮಣ್ಣಿನಿಂದ ಇಟ್ಟುಕೊಳ್ಳಿ, ವಿಸರ್ಜನೆ ಮಾಡಬೇಡಿ. ಪ್ರತಿವರ್ಷ ಅದೇ ಮಣ್ಣಿನ ವಿಗ್ರಹ ಇಟ್ಟು ಪೂಜಿಸಲಿಕ್ಕೆ ಬರುತ್ತೆ. ಅದು ಭಾವನೆಗೆ. ಸೀಯಿಂಗ್ ಇಸ್ ಬಿಲೀವಿಂಗ್ ಅಂತಾರಲ್ಲ, ಔಟ್ ಆಫ್ ಸೈಟ್ ಇಸ್ ಔಟ್ ಆಫ್ ಮೈಂಡ್ ಅಂತ ಆಂಗ್ಲ ಭಾಷೆಯಲ್ಲಿ ಹೇಳಿದ ಹಾಗೆ, ಅಮ್ಮನವರು ಈ ರೀತಿ ಇದ್ದಾಳೆ ಅಂತ ನಮಗೊಂದು ಭಾವನೆ ಬರಲಿ ಅಂತ ಹೇಳಿ ವಿಗ್ರಹವನ್ನು ಹೇಳಿದ್ದಾರೆ. ಪ್ರಮುಖವಾಗಿ ಏನು ಇದರಲ್ಲಿ ಇದೆ ಅಂತಂದ್ರೆ ತಟ್ಟೆಯಲ್ಲಿ ಒಂದು ಕಲಶ, ಕನ್ನಡಿ, ಎಷ್ಟು ಇಷ್ಟೇ, ಇಷ್ಟೊಂದು ಕಲಶವನ್ನು ಅದರಲ್ಲಿ ಗಂಗಾಜಲವನ್ನು ತುಂಬಿ ಅದಕ್ಕೆ ವಿಳೆದೆಲೆಯನ್ನು ಇಟ್ಟು ಇಡತಕ್ಕಂತದ್ದು. ಅದರ ಮುಂಭಾಗದಲ್ಲಿ ಏನಾಗುತ್ತೆ, ತಾಳೆಗರಿಯಲ್ಲಿ ಮಾಡಿದಂತಹ ಬಿಚ್ಚೋಲೆ ಇರುತ್ತೆ. ಎರಡು ಕರಿ ಬಳೆಯನ್ನು ತೊಡಿಸಿರತಕ್ಕಂತಹ ಪುಟಾಣಿ ಎರಡು ಬಿಚ್ಚೋಲೆ ಇರುತ್ತೆ. ತಾಳೆಗರಿಯನ್ನು ಈ ರೀತಿಯಾಗಿ ಸುತ್ತಿರತಕ್ಕಂತಹ ವರ್ತುಲಾಕಾರವಾಗಿ, ರೌಂಡಾಗಿ ಸುತ್ತಿ ಅದು ಬಿಚ್ಚಿಕೊಳ್ಳಬಾರದು ಅಂತ ಎರಡು ಕರಿ ಬಳೆಯನ್ನು ಹೀಗೆ ತೊಡಿಸಿರುತ್ತಾರೆ. ಆ ಒಳಗಡೆ ಏನಾಗಿರುತ್ತೆ, ಅಲ್ಲಿ ನಿಮಗೆ ಒಂದು ರಂಧ್ರವಿರುತ್ತೆ, ಅಲ್ಲೊಂದು ಗ್ಯಾಪ್ ಇರುತ್ತೆ. ಅದರಲ್ಲಿ ಒಂದರಲ್ಲಿ ಸಮುದ್ರದ ಅಥವಾ ನದಿಯ ಮರಳನ್ನು ಇಡಬೇಕು. ಅದಕ್ಕೆ ಮರಳು ಗೌರಿ ಅಂತ ಹೆಸರು. ಇನ್ನೊಂದರಲ್ಲಿ ಏನು ಮಾಡಬೇಕು? ಅರಿಶಿಣವನ್ನು ಇಡಬೇಕು. ಅದಕ್ಕೆ ಅರಿಶಿಣದ ಗೌರಿ ಅಂತ ಹೆಸರು ಅಥವಾ ಅದಕ್ಕೆ ಸಿಕತ ಗೌರಿ, ಹರಿದ್ರ ಗೌರಿ ಅಂತ ಹೆಸರು. ಪ್ರಮುಖವಾಗಿ ಸ್ವರ್ಣಗೌರಿಯನ್ನು ಆವಾಹನೆ ಮಾಡಬೇಕಾಗಿರತಕ್ಕಂತದ್ದು ಇವೆರಡರಲ್ಲೇ. ಇವೆರಡು ಮತ್ತು ಕಲಶ, ಕಲಶದ ಮುಂದೆ ಇಟ್ಟಿರತಕ್ಕಂತಹ ಒಂದು ಕನ್ನಡಿ, ಅಷ್ಟಮಂಗಳಗಳು ಅಂತ ಹೇಳುತ್ತೆ. ದೇವತಾ ಪ್ರತಿಷ್ಠಾ ವಿಧಿಯಲ್ಲಿ ಆಗಮದಲ್ಲೂ ಬರುತ್ತೆ, ಜ್ಯೋತಿಷ್ಯಶಾಸ್ತ್ರದಲ್ಲೂ ಬರುತ್ತೆ. ಮನೆಯಲ್ಲೂ ನೀವು ನೋಡಿರಬೇಕು, ನಿಮ್ಮ ಅನುಭವದಲ್ಲಿ ಕನ್ನಡಿ ಒಡೆದು ಹೋದ್ರೆ ಏನೋ ಅಪಶಕುನ ಅಂತ ಹೇಳಿ ಹೆದರಿಕೊಂಡು ಬಿಡ್ತಾರೆ. ಕನ್ನಡಿಯಲ್ಲಿ ಲಕ್ಷ್ಮಿಯ ಒಂದು ವಾಸ ಇರುತ್ತೆ, ದೇವತೆಯ ವಾಸ ಇರುತ್ತೆ, ಅಮ್ಮನವರು ಅದರಲ್ಲಿ ಒಂದು ಮನೆ ಮಾಡಿಕೊಂಡಿರುತ್ತಾಳೆ ಅಮ್ಮನವರು ಅಂತಕ್ಕಂತದ್ದು ಶಾಸ್ತ್ರಸಿದ್ಧವಾಗಿರತಕ್ಕಂತಹ ಒಂದು ಉಕ್ತಿ ಮತ್ತು ನಂಬಿಕೆ. ಆ ಮುಂಭಾಗದಲ್ಲಿ ಚಿಕ್ಕದಾಗಿರತಕ್ಕಂತಹ ಒಂದು ಕನ್ನಡಿಯನ್ನು ಇಡತಕ್ಕಂತದ್ದು, ಪ್ಲಾಸ್ಟಿಕ್ ಫ್ರೇಮ್ ಇರೋದು ಇಡಬೇಡಿ. ಸುಮ್ಮನೆ ಕನ್ನಡಿ ಇಟ್ಟರೆ ಸಾಕು ಅಥವಾ ಅದಕ್ಕೆ ಏನಾದರೂ ಮರದ ಫ್ರೇಮ್, ವುಡನ್ ಫ್ರೇಮ್ ಇದ್ರೆ ಅತ್ಯಂತ ಶ್ರೇಯಸ್ಸು. ಪ್ರತಿ ವರ್ಷದಲ್ಲೂ ಆ ಕನ್ನಡಿಯನ್ನೇ ಬಳಸಲಿಕ್ಕೆ ಬರುತ್ತೆ. ಇಟ್ಟು ಹಿಂಭಾಗದಲ್ಲಿ ಒಂದು ಪುಟಾಣಿಯಾಗಿರತಕ್ಕಂತಹ ನಿಮ್ಮ ಭಾವನೆಗೋಸ್ಕರ ಒಂದು ಮಣ್ಣಿನ ಗೌರಮ್ಮನನ್ನು ಇಟ್ಟುಕೊಳ್ಳಬಹುದು. ಮತ್ತೊಮ್ಮೆ ಹೇಳ್ತಿದ್ದೀನಿ, ಆ ಮಣ್ಣಿನ ಗೌರಿಯನ್ನು ವಿಸರ್ಜನೆ ಮಾಡತಕ್ಕಂತಹ ಅವಶ್ಯಕತೆ ಇಲ್ಲ. ಶಾಸ್ತ್ರದಲ್ಲಿ ಹೇಳಿಲ್ಲ. ಅದು ಯಾವ ರೀತಿಯಲ್ಲಿ ಬಂದು ಆ ಪಿಡುಗು ನಮ್ಮ ಸಮಾಜಕ್ಕೆ ಸೇರಿಕೊಂಡಿತೋ ನನಗೆ ಗೊತ್ತಿಲ್ಲ. ಈ ರೀತಿಯಾಗಿರತಕ್ಕಂತಹ ಕಲಶವನ್ನು ಹಿಂಬದಿಯಲ್ಲಿ ಗೌರಮ್ಮನನ್ನು ಕೂಡಿಸಿ ಕೆಲವರಿಗೆ ಸೀರೆಯನ್ನು ಉಡಿಸಿ ಅದರ ಮೇಲೆ ಇದನ್ನ ಇಡತಕ್ಕಂತದ್ದನ್ನ ಮಾಡ್ತಾರೆ. ಮತ್ತೆ ಅಕ್ಕಿಯನ್ನು ಹಾಸೋ, ಗೋಧಿಯನ್ನು ಹಾಸೋ ಅವರವರ ಸಂಪ್ರದಾಯದ ಪ್ರಕಾರವಾಗಿ ಮಾಡಿ ಅದರ ಮೇಲೆ ಕಲಶ, ಕನ್ನಡಿ ಮತ್ತು ಈ ಮರಳಿನ ಗೌರಿ ಮತ್ತು ಅರಿಶಿಣದ ಗೌರಿ ಇರತಕ್ಕಂತ ಕಲಶ ಕನ್ನಡಿಯನ್ನು, ಅದರ ಹಿಂಬದಿಯಲ್ಲಿ ಸ್ವರ್ಣಗೌರಿಯ ಈ ಮೃಣ್ಮಯವಾದ ಒಂದು ವಿಗ್ರಹವನ್ನು ಅಥವಾ ಕಾಷ್ಟಮಯವಾದ ವಿಗ್ರಹವನ್ನು ಅಥವಾ ಸಿಕತದ ಮೂಟೆಯಲ್ಲಿ ಅಂದ್ರೆ ಮರಳಿನ ಮೂಟೆಯಲ್ಲಿ ಮಾಡಿರತಕ್ಕಂತ ಅಮ್ಮನವರ ಮುಖವಾಡವನ್ನು ಇಟ್ಟಿರತಕ್ಕಂತದ್ದು ನಾವು ನೋಡಲಿಕ್ಕೆ ಸಿಗುತ್ತೆ. ಕೆಲವರು ಅಮ್ಮನವರ ಮುಖವಾಡ ಬೆಳ್ಳಿಯದು ಇದೆ, ಅದಕ್ಕೆ ಹೀಗೆ ತಗಲಿಸುತ್ತಾರೆ, ಕಾಯಿ ಕೂಡ ಇಟ್ಟು ಅದು ಅವರವರ ಸಂಪ್ರದಾಯದ ಪ್ರಕಾರ ಮಾಡಿಕೊಳ್ಳಬಹುದು. ಈ ರೀತಿಯಾಗಿ ಸ್ವರ್ಣಗೌರಿ ಅಮ್ಮನವರ ಪೂಜೆಗೆ ಎಲ್ಲವನ್ನು ಅಣಿಮಾಡಿಕೊಂಡು ಏನು ಮಾಡಬೇಕು, ಪೂಜೆಯನ್ನು ಪ್ರಾರಂಭ ಮಾಡಬೇಕು. ಇಲ್ಲೂ ಕೂಡ ಯಮುನಾ ಪೂಜೆಯನ್ನು ಹೇಳಿದೆ. ನಾನು ಹಿಂದಿನ ಸಂಚಿಕೆಯಲ್ಲಿ ಹೇಳಿದ ರೀತಿಯಲ್ಲೇ ಸ್ವರ್ಣಗೌರಿ ಅಮ್ಮನವರಿಗೂ ಕೂಡ ಒಂದು ಯಮುನಾ ಪೂಜೆ ಉಂಟು. ಆದರೆ ಈ ಯಮುನಾ ಪೂಜೆಯ ಪದ್ಧತಿ ಏನು ಅಂದ್ರೆ ಅಮ್ಮನವರನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಹೋಗಿ ಯಮುನಾ ಪೂಜೆ ಮಾಡಿ ಒಳಗೆ ತರತಕ್ಕಂತಹ ಸಂಪ್ರದಾಯ ಇಲ್ಲ. ಇಟ್ಟಿರುವ ಜಾಗದಲ್ಲೇ ಆ ಕಲಶ ಕನ್ನಡಿಯಲ್ಲಿ ಏನು ಮಾಡಬೇಕು, ಯಮುನಾಂಬಿಕೆಯನ್ನು ಮತ್ತೆ ಆವಾಹನೆ ಮಾಡಿ ಪೂಜೆಯನ್ನು ಮಾಡಿ ಆನಂತರದಲ್ಲಿ ಸ್ವರ್ಣಗೌರಿ ಅಮ್ಮನವರ ಪ್ರಾಣಪ್ರತಿಷ್ಠಾಪನೆಯನ್ನು ಮಾಡಿಸಿ, ಪ್ರಾಣಪ್ರತಿಷ್ಠಾಪನೆ ಮಾಡಿದ ಕಾಲದಲ್ಲಿ ಏನು ಮಾಡಬೇಕು ಅಂದ್ರೆ ಹೆಸರುಬೇಳೆ ಹುಗ್ಗಿ ಅಥವಾ ಶಾಲ್ಯಾನ್ನ. ಆ ಹೆಸರುಬೇಳೆ ಹುಗ್ಗಿ ಅಂದ್ರೆ ನಿಮಗೆ ಬಹುಶಃ ಸುಮಾರು ಜನರಿಗೆ ತಿಳಿಯಲಿಕ್ಕಿಲ್ಲ. ತಮಿಳು ಭಾಷೆಯಲ್ಲಿ ಅದಕ್ಕೆ ಪೊಂಗಲ್ ಅಂತ ಕರೀತಾರೆ. ಅದನ್ನ ನೈವೇದ್ಯಕ್ಕೆ ಇಡಬೇಕು. ಅಮ್ಮನವರಿಗೆ ಪ್ರಾಣಪ್ರತಿಷ್ಠಾಪನೆ ಮಾಡಿದಾಗ ಅದು ವಿಶೇಷ, ಸ್ವರ್ಣಗೌರಿ ವ್ರತದಲ್ಲಿ. ಆ ರೀತಿಯಾಗಿ ಪ್ರಾಣಪ್ರತಿಷ್ಠಾಪನೆ ಕಾಲದಲ್ಲಿ ಈ ಹುಗ್ಗೆಯ ನೈವೇದ್ಯವನ್ನು ಮಾಡಿ ಅದನ್ನು ತೆಗೆದು ಸ್ಥಳವನ್ನು ಮತ್ತೆ ಶುದ್ಧಿ ಮಾಡಿಕೊಂಡು ಕುಳಿತುಕೊಂಡು ಸ್ವರ್ಣಗೌರಿ ಅಮ್ಮನವರ ರಥದ ಒಂದು ಪೂಜೆಯನ್ನು ಮಾಡಬೇಕು, ಆರಂಭ ಮಾಡಬೇಕು. ಜೊತೆಯಲ್ಲಿ ಇಲ್ಲೇನು ವೈಶಿಷ್ಟ್ಯತೆ ಈ ಅಮ್ಮನವರು ಅಂದ್ರೆ ಇಲ್ಲೂ ಕೂಡ ನಮ್ಮ ಕೈಮಣಿಕಟ್ಟಿಗೆ ಕಟ್ಟಿಕೊಳ್ಳತಕ್ಕಂತಹ ಒಂದು ರಕ್ಷೆ ಇದೆ. ದೋರಬಂಧನ, ದಾರ ಕಟ್ಟಿಕೊಳ್ಳುವುದು, ಎಳೆ ಕಟ್ಟಿಕೊಳ್ಳುವುದು. ಈ ಅಮ್ಮನವರ ವೈಶಿಷ್ಟ್ಯತೆ ಏನು ಅಂತಂದ್ರೆ 16 ಎಳೆಯ ಹಸಿ ದಾರ, 16 ಮುಷ್ಟಿ ಇರತಕ್ಕಂತಹ ಉದ್ದ, 16 ಗಂಟುಗಳನ್ನು ಹಾಕಿ ಈ ಹಿಂದೆ ಹೇಳಿದಂತಹ ವ್ರತದಂತೆ ಇಲ್ಲೂ ಕೂಡ ಒಂದು ತಟ್ಟೆಯಲ್ಲಿ ವಿಳೆದೆಲೆ, ಅಡಿಕೆ ಮತ್ತು ಅದರ ಮೇಲೆ ಈ 16 ಎಳೆ, 16 ಮುಷ್ಟಿ, 16 ಗಂಟು ಹಾಕಿರತಕ್ಕಂತಹ ಆ ದೋರವನ್ನು, ಆ ದಾರವನ್ನು, ಆ ಎಳೆಯನ್ನು ಇಟ್ಟು ಪೂಜೆ ಪ್ರಾರಂಭ ಮಾಡಬೇಕು ಅಮ್ಮನವರಿಗೆ. ಅಮ್ಮನವರಿಗೆ ಪೂಜೆಯನ್ನು ಯಥಾವಿಭವವಾಗಿ ಮಾಡಬಹುದು. 16 ಎಳೆಯ ಯಾವುದೋ ಗೆಜ್ಜೆ ವಸ್ತ್ರವನ್ನು ಇಡಬಹುದು. ಸಾಧ್ಯ ಇಲ್ಲದಿದ್ದರೆ ಒಂದು ಎಳೆಯನ್ನೇ ಇಟ್ಟುಕೊಳ್ಳಬಹುದು. ಮಾಡಿ 16 ತರದ ಹೂವು, ಪತ್ರೆ ಇತ್ಯಾದಿಗಳಿಂದ ಅಮ್ಮನವರ ವ್ರತದಲ್ಲಿ ಹೇಳಿರತಕ್ಕಂತಹ ಪೂಜೆಯನ್ನು, ಅಂಗಪೂಜೆ ಇತ್ಯಾದಿಗಳನ್ನು ಮಾಡಿ ಧೂಪ, ದೀಪ, ನೈವೇದ್ಯ ಆದಿಗಳೆಲ್ಲ ಸಮರ್ಪಣೆಯನ್ನು ಮಾಡತಕ್ಕಂತದ್ದನ್ನು ಮಾಡಬೇಕು. ಆನಂತರದಲ್ಲಿ ಏನು ನೈವೇದ್ಯ, ಮಹಾನೈವೇದ್ಯವನ್ನು ಮಾಡಬೇಕು. ಮಹಾನೈವೇದ್ಯ ಅಂದ್ರೆ ಎಲ್ಲಿ? ಪಾಯಸ, ಕೋಸುಂಬರಿ, ಪಾನಕ, ಹಾಲು, ಮೊಸರು ಮತ್ತು ನಾನಾ ವಿಧವಾದ ಹಣ್ಣುಗಳು, ಚಿತ್ರಾನ್ನವನ್ನು, ಹೋಳಿಗೆಯನ್ನು, ಕಡಬನ್ನು, ಏನು ಬೇಕಾದರೂ ಮಾಡಬಹುದು. ಮೋದಕವನ್ನು ಗಣಪತಿಗೆ ಮಾಡಬೇಕು ಅಂತ ಏನಿಲ್ಲ. ಇತ್ಯಾದಿಗಳೆಲ್ಲವನ್ನು ಮಾಡಿ ನೈವೇದ್ಯವನ್ನು ಮಾಡತಕ್ಕಂತಹ ಒಂದು ಪದ್ಧತಿ, ಪ್ರತೀತಿ ಇದೆ. ಈ ದೋರಬಂಧನ ಅಂತ ಹೇಳೋದಿಲ್ಲ, ಕೈಗೆ ದಾರವನ್ನು ಕಟ್ಟಿಕೊಳ್ಳಬೇಕು ಅಂತ ಅಷ್ಟೇ ಅಲ್ಲ. ಏನು ಮಾಡಬೇಕು ಅಂತಂದ್ರೆ ಈ 16 ಎಲೆಯಲ್ಲಿ, 16 ಮುಷ್ಟಿಯಲ್ಲಿ, 16 ಗಂಟಿನಲ್ಲಿ ಸ್ವರ್ಣಗೌರಿ ಅಮ್ಮನವರ 16 ನಾಮಗಳಿಂದ ಅಮ್ಮನವರನ್ನು ಆವಾಹನೆ ಮಾಡಿ ಪೂಜಿಸಿ ಇಟ್ಟಿರಬೇಕು. ಆನಂತರದಲ್ಲಿ ಅದನ್ನು ಕಟ್ಟಿಕೊಂಡು ದೇವತಾ ಪ್ರಾರ್ಥನೆಯನ್ನು ಮಾಡಬೇಕು. ಸ್ವರ್ಣಗೌರಿ ಅಮ್ಮನವರಿಗೆ ಎರಡು ಮರದ ಬಾಗಿನವನ್ನು ಕೊಡಬೇಕು. ಇಲ್ಲೊಂದು ಚಿಕ್ಕದಾಗಿರತಕ್ಕಂತಹ ಒಂದು ವಿಶೇಷವನ್ನು ನಾವು ಗಮನಿಸಬೇಕು. ಅದೇನು ಅಂದ್ರೆ ಮರದಲ್ಲಿ ನಾವು ಅಮ್ಮನವರಿಗೆ ಮರದಲ್ಲಿ ನಾವು ಬಾಗಿನವನ್ನು ಕೊಡ್ತೀವಿ ಅಂತಂದ್ರೆ ಅದು ಬಿದಿರಿಂದಲೇ ಆಗಿರಬೇಕು. ಇತ್ತೀಚಿನ ದಿನಗಳಲ್ಲಿ ಬಂದಿರತಕ್ಕಂತಹ ಪ್ಲಾಸ್ಟಿಕ್ಕಿನ ಕೆಲವು ಅಥವಾ ಬಿದಿರಿನ ತರ ಕಾಣತಕ್ಕಂತಹ ಹಲವಾರು ಮೊರಗಳು ಬಂದಿರತಕ್ಕಂತದ್ದು ನಾವು ನೋಡಿದ್ದೇವೆ. ಅದು ವರ್ಜ್ಯ. ಅದಕ್ಕೆ ಕಾರಣವೂ ಉಂಟು, ಶಾಸ್ತ್ರದಲ್ಲಿ ಬಹಳ ಸುಸ್ಪಷ್ಟವಾಗಿ ಹೇಳಿದೆ. ಅದಕ್ಕೆ ಏನು ಹೇಳುತ್ತೆ ಅಂತ ಅಂದ್ರೆ ವಂಶಜ ಶೂರ್ಪ ಅಂತ. ವಂಶಜ ಅಂತ ಅಂದ್ರೆ ಏನು? ವಂಶ ಅಂತ ಅಂದ್ರೆ ಬಿದಿರು. ಬಿದಿರು ಶೂರ್ಪ ಅಂದ್ರೆ ಏನು? ಮರದಿಂದಲೇ ಮಾಡಿ ನೀವು ಕೊಡಬೇಕು ಅಂತ. ಅಮ್ಮನವರಿಗೆ ಎರಡು ಬಾಗಿನವನ್ನು ಕೊಡಬೇಕು. ಆನಂತರದಲ್ಲಿ ಮಿಕ್ಕ ಮುತ್ತೈದೆಯರಿಗೆ ಬಾಗಿನವನ್ನು ನೀವು ಬೀರತಕ್ಕಂತದ್ದು ಅಥವಾ ಕೊಡತಕ್ಕಂತದ್ದು. ಅವರವರಲ್ಲಿ ಕೆಲವರು ಐದು ಕೊಡ್ತಾರೆ, ಕೆಲವರು ಒಂಬತ್ತು ಕೊಡ್ತಾರೆ, ಕೆಲವರು 16ನ್ನು ಕೊಡತಕ್ಕಂತಹ ಪದ್ಧತಿ ಇರತಕ್ಕಂತವರು ನಿಮ್ಮ ಭಕ್ತಿ, ನಿಮ್ಮ ಶಕ್ತಿ, ನಿಮ್ಮ ಸಂಪ್ರದಾಯವನ್ನು ಅನುಸರಿಸಬಹುದು. ಇದಾದ ನಂತರದಲ್ಲಿ 16 ದೀಪಗಳ ಒಂದು ಆರತಿಯನ್ನು ಮಾಡಬೇಕು ಸ್ವರ್ಣಗೌರಿ ಅಮ್ಮನವರಿಗೆ. 16 ದೀಪವನ್ನು ತಟ್ಟೆಯಲ್ಲಿ ಹಚ್ಚಿ, ತುಪ್ಪದಾದರೆ ಮಹಾಶ್ರೇಷ್ಠ. ಅಮ್ಮನವರಿಗೆ ಯಾವುದಾದರೂ ಸ್ತೋತ್ರವನ್ನು, ಹಾಡನ್ನು ಹೇಳಿಕೊಂಡು ಆ ಆರತಿಯನ್ನು ಮಾಡಿ, ಆ ಆರತಿಯನ್ನು ತೆಗೆದು ಅಮ್ಮನವರ ಮುಂದೆಯೇ ಅದನ್ನು ಸ್ಥಾಪನೆ ಮಾಡಬೇಕು. ಆನಂತರದಲ್ಲಿ ಏನು ಮಾಡಬೇಕು, ಪುರೋಹಿತರಿಗೆ ಉಪಾಯನ ದಾನವನ್ನು ಕೊಡಬೇಕು. ತಟ್ಟೆಯಲ್ಲಿ ಅಕ್ಕಿ, ಎರಡು ಒಂದು ಯುಗ್ಮ ಅಂದರೆ ವಿಳೆದೆಲೆ ಅಡಿಕೆ, ವಿಳೆದೆಲೆ ಅಡಿಕೆ ಇಟ್ಟು ಎರಡು ತೆಂಗಿನಕಾಯಿಯನ್ನು ಇಟ್ಟು ನಿಮ್ಮ ಶಕ್ತ್ಯಾನುಸಾರ ದಕ್ಷಿಣೆಯನ್ನು ಅದರಲ್ಲಿ ಇಟ್ಟು ಅದನ್ನು ಅವರಿಗೆ ಕೊಡಬೇಕು. ಕ್ಯಾಸೆಟ್ ಹಾಕಿಕೊಂಡು ಪೂಜೆ ಮಾಡತಕ್ಕಂತಹ ಪದ್ಧತಿ ಕೆಲವರಲ್ಲಿ ಇದೆ. ಅದು ಅಂತಹ ದೊಡ್ಡ ಫಲವನ್ನು ಕೊಡುವುದಿಲ್ಲ. ಇದನ್ನು ಸ್ವಲ್ಪ ನೀವು ಮನಗಾಣಿ. ಇಲ್ಲ, ನಾವು ಹಾಗೆ ಮಾಡ್ತಾ ಇದ್ದೀವಿ ಅಂದ್ರೆ ಅದು ನಿಮ್ಮ ಇಷ್ಟ, ನಾವು ಅಲ್ಲಿಗೆ ಬಿಡ್ತೇವೆ. ಶಾಸ್ತ್ರ ಅದನ್ನು ಒಪ್ಪೋದಿಲ್ಲ. ಯಾಕೆಂದ್ರೆ ಸಜೀವವಾಗಿರತಕ್ಕಂತಹ, ಸದೃಢನಾಗಿರತಕ್ಕಂತಹ ವ್ಯಕ್ತಿ ಪೂಜೆ ಮಾಡಿಸಿ ಮಂತ್ರ ಹೇಳಿದಾಗ ಆಗತಕ್ಕಂತಹ ಒಂದು ಪ್ರಭಾವ, ಪರಿಣಾಮ ಇದೆಯಲ್ಲ, ಅದು ಈ ಒಂದು ಕ್ಯಾಸೆಟ್‌ಗಳು ಅಥವಾ ಚಿಪ್‌ಗಳು ಅಥವಾ ಫೋನಿನಿಂದ ಹಾಕತಕ್ಕಂತದ್ದು ಕೆಲಸ ಮಾಡುವುದಿಲ್ಲ. ಅದರಲ್ಲಿ ಜೀವ ಇರುವುದಿಲ್ಲ. ಅದು ಶಬ್ದ ಆಗುತ್ತೆ, ಅದು ನಾದವಾಗುವುದಿಲ್ಲ. ನಾದಕ್ಕೂ ಶಬ್ದಕ್ಕೂ ಬಹಳ ದೊಡ್ಡ ದೂರ ಇದೆ. ಇಲ್ಲ, ನೀವು ಹಾಗೆ ಮಾಡ್ತೀರಾ, ನಮಗೆ ಅನುಕೂಲ ಇಲ್ಲ, ವಿದೇಶ ವಿದೇಶದಲ್ಲೆಲ್ಲ ಸುಮಾರು ಜನ ಇರ್ತಾರೆ. ಅವಾಗ ಏನು ಮಾಡಬೇಕು ಅಂದ್ರೆ ಆ ರೀತಿಯಾಗಿ ನೀವು ಧ್ವನಿಮುದ್ರಿತವಾಗಿರತಕ್ಕಂತದ್ದರಿಂದ ನೀವು ಮಂತ್ರವನ್ನು ಹೇಳಿಕೊಂಡು, ಕೇಳಿಕೊಂಡು ಪೂಜೆಯನ್ನು ಮಾಡಿದಾಗಲೂ ಒಬ್ಬ ಸದ್ಬ್ರಾಹ್ಮಣನಿಗೆ ನೀವು ಉಪಾಯನ ದಾನವನ್ನು ಸದಕ್ಷಿಣವಾಗಿ ಕೊಡಲೇಬೇಕು. ಇಲ್ಲದೆ ಇದ್ದರೆ ವ್ರತದ ಫಲ ನಿಮಗೆ ಬರುವುದಿಲ್ಲ. ಸ್ವರ್ಣಗೌರಿಯ ಒಂದು ಪೂಜೆಯ ಮಹತ್ವವೇನು ಅಂತ ನಾವು ನೋಡಿದಾಗ ಗೌರ ಅಥವಾ ಗೌರಿ ಅಂದ್ರೆ ಏನು ಅಂತಂದ್ರೆ ಬಿಳುಪು ಅಂತ. ಸ್ವರ್ಣಗೌರಿ ಅಂದ್ರೆ ಏನು ಅಂತಂದ್ರೆ ಹಾಲಿಗೆ ಕರಗಿಸಿರುವ ಬಂಗಾರವನ್ನು ಮಿಶ್ರಣ ಮಾಡಿದ್ರೆ ಯಾವ ಕಲರ್ ಬರುತ್ತೆ, ಯಾವ ಬಣ್ಣ ಬರುತ್ತೆ, ಆ ರೀತಿಯಾಗಿರತಕ್ಕಂತಹ ಬಣ್ಣದವಳು, ಸರ್ವಾಂಗ ಸೌಂದರ್ಯ ತರತಕ್ಕಂತಹ ಜಗನ್ಮಾತೆ ಅಂತ ಅದರ ಅರ್ಥ. ಹಿಂದಿನ ದಿನಗಳಲ್ಲಿ ಪುರಾಣದಲ್ಲಿ ಒಂದು ಚಿಕ್ಕ ಕಥೆ ಬರುತ್ತೆ, ಸ್ವರ್ಣಗೌರಿ ವ್ರತದ ಪ್ರಾದುರ್ಭಾವ ಹೇಗೆ ಹುಟ್ಟಿತು ಅಂತ ಹೇಳಿ. ಪರಮೇಶ್ವರನ ಹೆಂಡತಿ ಜಗದಂಬಿಕೆ ಕಾಳಿ ಅಲ್ವೇ, ಹೇಗಿರ್ತಾಳೆ? ಕಾಳಿಯಮ್ಮನವರು ಕಪ್ಪು ಬಣ್ಣ, ನೀಲಾಂಜನ ಸಮಾಭಾಸ ಅಂತಾರೆ ಅಂದ್ರೆ ಕಡುನೀಲಿ ಬಣ್ಣದ ಕಪ್ಪಿನ ಮೈಯವಳು ಅಂತ ಹೇಳಿ. ಆಮೇಲೆ 10 ತಲೆ ಆ ಯಮ್ಮನಿಗೆ, ಆಮೇಲೆ 20 ಕಾಲು, 20 ಕೈಗಳು ಈ ರೀತಿಯಾಗಿ ಎಲ್ಲ ಇದ್ದು ರುಂಡಮಾಲೆಯನ್ನು ಹಾಕಿಕೊಂಡು ನಾಲಿಗೆಯನ್ನು ಚಾಚಿಕೊಂಡು ಇದ್ಲು. ಆ ರೀತಿ ಇದ್ದಾಗ ಏನಾಗುತ್ತೆ, ಭಯಂಕರವಾಗಿರತಕ್ಕಂತಹ ಬಹಳ ರೌದ್ರಾವತಾರವಾಗಿರತಕ್ಕಂತಹ ಆಕೆಯನ್ನು ನೋಡಿ ಅಷ್ಟು ಹಿಡಿಸಲಿಲ್ಲವಂತೆ ಪರಮೇಶ್ವರನಿಗೆ. ಆಗ ಏನು ಮಾಡಿದ, ಸ್ವಲ್ಪ ದೂರ ಇದ್ದ. ಆಗ ಈಕೆಗೆ ಬಹಳ ಯೋಚನೆಯಾಗಿ ಮಹರ್ಷಿಗಳು ಯಾರೋ ಹೇಳಿದರಂತೆ, ನೀನು ಹೋಗಿ ಈ ರೀತಿಯಾಗಿ ಇಂತಹ ಪುಣ್ಯಸ್ನಾನವನ್ನು ಮಾಡಿ ನೀನು ಸೌಮ್ಯವಾದ ಈ ರೂಪವನ್ನು ಧರಿಸಮ್ಮ. ಯಾವ ರೀತಿಯಾಗಿ ಬಂಗಾರದ ಛಾಯೆ ಇರತಕ್ಕಂತಹ, ಬೆಳ್ಳಗಿರತಕ್ಕಂತಹ, ಸರ್ವಾಂಗ ಸೌಂದರ್ಯವಾಗಿ ಅತ್ಯಂತ ಸೌಮ್ಯ ರೂಪದಲ್ಲಿ ಬಾ ತಾಯಿ, ಆಗ ಪರಮೇಶ್ವರ ನಿನಗೆ ಒಲಿಯುತ್ತಾನೆ ಅಂತ. ಆ ರೀತಿಯಾಗಿ ಅಮ್ಮನವರು ಏನು ಮಾಡಿದರು, ಗಂಗಾದಿ ಪುಣ್ಯತೀರ್ಥದಲ್ಲಿ ನಿಮಜ್ಜನವನ್ನು ಮಾಡಿ ಈ ಒಂದು ಕ್ರೌರ್ಯ ಮತ್ತು ತಾಮಸ ರೂಪವನ್ನು ತ್ಯಜಿಸಿ ಏನು ಮಾಡಿದಳು, ಅತ್ಯಂತ ಸಾತ್ವಿಕವಾಗಿರತಕ್ಕಂತಹ ತ್ರಿಪುರಸುಂದರಿಯ ರೂಪವನ್ನು ಧರಿಸಿ ಬಂದಳು. ಅವಾಗ ನಮ್ಮ ಪರಮೇಶ್ವರನಿಗೆ ಅತ್ಯಂತ ಖುಷಿಯಾಗಿ ಹೆಂಡತಿಯನ್ನು ಮನಃಪೂರ್ವಕವಾಗಿ ಸ್ವೀಕಾರ ಮಾಡಿದ ನಂತರದಲ್ಲೇ ಗಣಪತಿ, ಸುಬ್ರಹ್ಮಣ್ಯೇಶ್ವರ ಆದಿಗಳ ಅವತಾರ ಆಗಿದ್ದು ಅಂತ ಹೇಳಿ ಹಿರಿಯರು ಒಂದು ಕಥೆಯನ್ನು ಹೇಳ್ತಾ ಇದ್ದರು ನಮಗೆ ಪಾಠ ಆಗುವ ಕಾಲದಲ್ಲಿ. ಇದರ ಪರಮಾರ್ಥ ಏನು ಅಂತ ಅಂದ್ರೆ ಯಾವ ಹೆಣ್ಣು ಮಕ್ಕಳಿಗೆ ಅವರ ಕೌಟುಂಬಿಕವಾಗಿರತಕ್ಕಂತಹ ಜೀವನ, ದಾಂಪತ್ಯ ಜೀವನ ಬಹಳ ವಿಶೇಷವಾಗಿ ದಾಂಪತ್ಯ ಜೀವನ 100 ವರ್ಷ ಅದ್ಭುತವಾಗಿ ನಡೆಯಬೇಕು, ಮನೆಯಲ್ಲಿ ಮಕ್ಕಳೋ ಮರಿಗಳೋ ಇರಬೇಕು, ಗಂಡನಿಗೆ ಅತ್ಯಂತ ಪ್ರೀತಿಪಾತ್ರಳಾಗಿರತಕ್ಕಂತವಳಾಗಬೇಕು ಅಂತ ಇದಿಯೋ ಮತ್ತು ಸೌಭಾಗ್ಯವತಿಯರಾಗಿ ಮುತ್ತೈದೆಯಾಗಿ 100 ಕಾಲ ಬಾಳಬೇಕು ಅಂತ ಇದಿಯೋ, ಆ ಹೆಣ್ಣು ಮಕ್ಕಳು ತಪ್ಪದೆ ಸ್ವರ್ಣಗೌರಿ ವ್ರತಾಚರಣೆಯನ್ನು ಮಾಡಲೇಬೇಕು. ಮಾಡಿದ್ದೇ ಆದರೆ ಯಾವ ರೀತಿಯಾಗಿ ಪರಮೇಶ್ವರನು ಅಮ್ಮನವರನ್ನು ತನ್ನ ಹೃದಯದ ರಾಣಿಯಾಗಿ, ಮನಸ್ಸಿನ ರಾಣಿಯಾಗಿ ಮಾಡಿಕೊಂಡನೋ ಅದೇ ರೀತಿಯಾಗಿ ಅವರವರ ಗಂಡನಿಗೆ ಇವರು ಮನದನ್ನೆಯಾಗಿ, ಹೃದಯದ, ಮನಸ್ಸಿನ ರಾಣಿಯಾಗಿ ಅತ್ಯಂತ ಪ್ರೀತಿಪಾತ್ರರಾಗ್ತಾರೆ. ಪರಸ್ಪರ ಗಂಡ ಹೆಂಡತಿಯರ ಮಧ್ಯದಲ್ಲಿ ಅದ್ಭುತವಾದ ಅನುರಾಗ ಉಂಟಾಗುತ್ತೆ, ಗೌರವ ಉಂಟಾಗುತ್ತೆ. ಅದರಿಂದ ಏನಾಗುತ್ತೋ ವಂಶಾಭಿವೃದ್ಧಿ ಉಂಟಾಗುತ್ತೆ ಮತ್ತು ಮನೆಯಲ್ಲಿ ಮಕ್ಕಳು ಕೂಡ ಸತ್ಕರ್ಮ ಪ್ರವರ್ತಕರಾಗಿ ಮುಂದುವರಿಯುತ್ತಾರೆ ಅಂತಕ್ಕಂತದ್ದು ಆಗಿದೆ. ಆದ್ದರಿಂದ ಯಾರಿಗೆ ಮದುವೆ ಆಗಿಲ್ಲ ಅವರು ಕೂಡ ಈ ಸ್ವರ್ಣಗೌರಿ ಅಮ್ಮನವರ ವ್ರತವನ್ನು ಈ ಭಾದ್ರಪದ ಮಾಸದಲ್ಲಿ ಮಾಡಿದ್ದೇ ಆದರೆ ಅವರಿಗೆ ಬಹಳ ಒಳ್ಳೆಯ ಗಂಡ ಸಿಗತಕ್ಕಂತದ್ದು ನೋಡಿದ್ದೇವೆ ನಾವು. ನಿಮ್ಮ ಅನುಭವಕ್ಕೂ ಮಾಡಿ ನೋಡಿ, ಬರುತ್ತೆ. ಇದರಲ್ಲಿ ಬೇಕಾಗಿರತಕ್ಕಂತದ್ದು ಮೊದಲನೆಯದು ಶ್ರದ್ಧಾ ಭಕ್ತಿ. ಮೂರನೆಯದು ಏನು ಮಾಡಬೇಕು, ಸಾಮಗ್ರಿಗಳ ಯಾವುದೇ ಒಂದು ಲೋಪವನ್ನು ನಾವು ಮಾಡಬಾರದು. ಅದಕ್ಕೊಂದು ಚಿಕ್ಕದಾಗಿರತಕ್ಕಂತ ಒಂದು ಶ್ಲೋಕ ಇದೆ ಶಾಸ್ತ್ರದಲ್ಲಿ. ಯಾರೊಬ್ಬ ಹೀಗೆ ದೇವರ ಪೂಜೆ ಮಾಡ್ತಿದ್ದನಂತೆ, ಪರಮೇಶ್ವರನಿಗೆ ಧೂಪ ದೀಪ ಮಾಡ್ತಿರಲಿಲ್ಲ ಅವನು. ಸುಮ್ಮನೆ ಯಾಕೆ ಮಾಡೋದು, ಖರ್ಚು ಬಾಪ್ತು ಅಂತ. ಅವನು ಶ್ಲೋಕ ಹೇಳಿದ್ನಂತೆ ದೇವರಿಗೆ ನೀನೇ ಎಲ್ಲಾ ಆಗಿರೋದ್ರಿಂದ, “ಧೂಪದೀಪ ದ್ವಯಂ ನಾಸ್ತಿ ಪ್ರಸೀದ ಪರಮೇಶ್ವರ” ಅಂತೆ. ಧೂಪದೀಪ ಎರಡಿಲ್ಲಪ್ಪ, ನನಗೆ ನೀನು ಪ್ರಸನ್ನನಾಗು ಅಂತೆ. ಪಟ್ ಅಂತ ಎದುರಿಗೆ ಈಶ್ವರ ಪ್ರತ್ಯಕ್ಷ ಆಗ್ಬಿಟ್ಟಂತೆ. ಅಯ್ಯಾ, ನಿನ್ನ ಭಕ್ತಿಗೆ ನಾನು ಮೆಚ್ಚಿದ್ದೀನಿ, ಪರವಾಗಿಲ್ಲ, ಧೂಪ ದೀಪ ನೀನು ಎರಡು ಕೊಟ್ಟಿಲ್ಲ, ಆದರೆ ನಾನು ನಿನಗೂ ಆಶೀರ್ವಾದ ಮಾಡ್ತೀನಿ. “ಅನ್ನ ವಸ್ತ್ರ ದ್ವಯಂ ನಾಸ್ತಿ ಚಿರಂಜೀವಿ ಸುಖಿ ಭವ” ಅಂತೆ. ಅಂದ್ರೆ ನಿನಗೆ ಅನ್ನವನ್ನು ಕೊಡುವುದಿಲ್ಲ, ವಸ್ತ್ರ ಕೊಡೋಲ್ಲ. ನೀನು ಚಿರಂಜೀವಿಯಾಗಿ ಬದುಕಿಬಿಡಪ್ಪ. ಅಂದ್ರೆ ಇದು ಒಂದು ಸೂಚ್ಯವಾಗಿರತಕ್ಕಂತಹ ಶ್ಲೋಕ. ಯಾವುದೇ ಕಾರಣಕ್ಕೂ ಆ ಸಂಭಾರವನ್ನು ನೀವು ಭವ್ಯವಾಗಿ, ದಿವ್ಯವಾಗಿ, ಆಡಂಬರದಿಂದ ಮಾಡತಕ್ಕಂತಹದ್ದು ಅವಶ್ಯಕತೆ ಇಲ್ಲ. ಆದರೆ ಹೇಳಿರತಕ್ಕಂತಹದ್ದನ್ನು ನಿಮ್ಮ ಶಕ್ತ್ಯಾನುಸಾರ ಮಾಡಲೇಬೇಕಾಗಿರತಕ್ಕಂತದ್ದು. ಮಾಡಲೇಬೇಕು. ಸ್ವಲ್ಪ ಅವತ್ತೊಂದು ದಿವಸ ಭೂರಿಯಾಗಿ ಚೆನ್ನಾಗಿ ನಿಮಗೆ ಶಕ್ತಿಗೆ ಅನುಗುಣವಾಗಿ ಹೂವನ್ನು, ಗೆಜ್ಜೆ ವಸ್ತ್ರವನ್ನು, ವಸ್ತ್ರವನ್ನು, ಧೂಪವನ್ನು, ದೀಪವನ್ನು, ನೈವೇದ್ಯವನ್ನು, ನೀರಾಜನವನ್ನು, ಆರತಿಯನ್ನು ಹೆಣ್ಣು ಮಕ್ಕಳಿಗೆ ಬಾಗಿನವನ್ನು ಕೊಡಬೇಕಾದರೆ ಸ್ವರ್ಣಗೌರಿ ಅಮ್ಮನವರಿಗೆ ಕೊಡ್ತಾ ಇದ್ದೀನಿ ಅಂತ ನೋಡಿಕೊಂಡು ಕೊಡಿ. ನಿಮ್ಮ ಅಕ್ಕತಂಗಿಯರಿಗೆ ಬೀರ್ಕೊಳ್ಳತಕ್ಕಂತದ್ದು ದೊಡ್ಡ ಫಲವನ್ನು ಕೊಡುವುದಿಲ್ಲ. ಸಂಬಂಧ ಇಲ್ಲದೆ ಇರತಕ್ಕಂತ ಮುತ್ತೈದೆಯನ್ನು ಕರೆದು ಬಾಗಿನವನ್ನು ಕೊಡಬೇಕು. ಹೊರಗಿನವರಿಗೂ ಕೂಡ ನೀವು ರೇಷ್ಮಾವಸ್ತ್ರ ಕೊಡೋದು, ನಿಮ್ಮ ಅಕ್ಕತಂಗಿಯರಿಗೆ ಕೊಟ್ಕೋಬೇಡಿ, ಅತ್ತಿಗೆಗೆ ಕೊಟ್ಕೋಬೇಡಿ. ಅರ್ಥವಾಯಿತೆ? ಅದರಲ್ಲಿ ಏನು ಮಾಡಬೇಕು? ಬೇರೆಯವರಿಗೂ ಅದೇ ರೀತಿಯಾದಂತಹ ವಸ್ತ್ರವನ್ನೇ ಕೊಡಬೇಕು, ಇಲ್ಲಾಂದ್ರೆ ಅಲ್ಲೇನಾಗುತ್ತೆ ಅಂತಂದ್ರೆ ಆ ತಾರತಮ್ಯ ದೋಷ ಉಂಟಾಗುತ್ತೆ. ನಿಮ್ಮ ಮನೆಯವರಿಗೆ ರೇಷ್ಮೆ ಬಟ್ಟೆ ಕೊಡೋದು, ಬೇರೆಯವರಿಗೆ ಯಾವುದೋ ಒಂದು ಸೀರೆಯನ್ನು ಕೊಟ್ಟುಬಿಡೋದು, ಅದು ಉಪಯೋಗಕ್ಕೆ ಬರುವುದಿಲ್ಲ. ಆ ರೀತಿಯಾಗಿ ಸ್ವರ್ಣಗೌರಿ ಈ ವ್ರತವನ್ನು ಮಾಡಿ 16 ಎಳೆಯ ದೋರಬಂಧನವನ್ನು ಮಾಡಿಕೊಂಡಿದ್ದೇ ಆದರೆ ಅವರಿಗೆ ಅತ್ಯಂತ ಪತಿಗೆ ಪ್ರೀತಿಪಾತ್ರರಾಗುವುದರೊಂದಿಗೆ ಅವರ ಸಾಂಸಾರಿಕ ಜೀವನ ಅತ್ಯಂತ ಸುಖಮಯವಾಗಿ ಜರಗುತ್ತೆ ಅಂತಕ್ಕಂತದ್ದು. ಶಾಂತಿ ನೆಮ್ಮದಿ ಸಿಗುತ್ತೆ. ಎರಡನೇದು ಏನು ಹೇಳುತ್ತೆ ಗೊತ್ತಾ, ಸ್ವರ್ಣಗೌರಿ ಇನ್ನೊಂದು ಪೂಜಾ ಮಹಿಮೆ, ಆ ಸ್ವರ್ಣಗೌರಿ ಅಮ್ಮನವರಿಗೆ ನಾವು ಉಡಿ ತುಂಬೋದು ಕೂಡ ಶಾಸ್ತ್ರದಲ್ಲಿ ಹೇಳುತ್ತೆ. ಆ ಅಮ್ಮನವರನ್ನು ಕೆಳಗಿಳಿಸಿ ಸೀರೆಯನ್ನು ಒಂದು ಹಾಸಿ ಏನು ಮಾಡ್ತಾರೆ, ಅದರಲ್ಲಿ ಉಡಿ ತುಂಬುತ್ತಾರೆ. ಉಡಿ ತುಂಬಬೇಕಾದರೆ ಅದರಲ್ಲಿ ಏನು ಮಾಡ್ತಾರೆ, ಅಕ್ಕಿ, ಮಂಗಳದ್ರವ್ಯಗಳು, ಹಣ್ಣುಗಳು, ಅದರಲ್ಲಿ ಬಳೆ, ಬಿಚ್ಚೋಲೆ, ಕಾಡಿಗೆ, ಕನ್ನಡಿ ಇತ್ಯಾದಿ ಎಲ್ಲವನ್ನು ಇಟ್ಟು ಎರಡು ತಟ್ಟೆಯನ್ನು ಇಟ್ಟುಕೊಂಡು ಏನು ಮಾಡ್ತಾರೆ ಅಂದ್ರೆ ಒಂದು ಮುಷ್ಟಿಯಲ್ಲಿ ಅಕ್ಕಿಯನ್ನು, ಇನ್ನೊಂದು ಮುಷ್ಟಿಯಲ್ಲಿ ಉಪ್ಪನ್ನು ತಗೋತಾರೆ ಅಥವಾ ಒಂದು ಮುಷ್ಟಿಯಲ್ಲಿ ಅಕ್ಕಿಯನ್ನು, ಇನ್ನೊಂದು ಮುಷ್ಟಿಯಲ್ಲಿ ಯಾವುದಾದರೂ ಬೇಳೆಯನ್ನು ತೆಗೆದುಕೊಂಡು ಏನು ಮಾಡ್ತಾರೆ ಅಂತಂದ್ರೆ ಈ ರೀತಿಯಾಗಿ ಕೈಯನ್ನು ಈ ರೀತಿ ಬದಲಾಯಿಸಿ ಏನು ಮಾಡ್ತಾರೆ, ಅಕ್ಕಿಯನ್ನು, ಉಪ್ಪನ್ನು ಅಥವಾ ಬೇಳೆಯನ್ನು ಹಾಕೋದು ಮೂರು ರೀತಿಯಾಗಿ ಆ ತರ ಮಾಡ್ತಾರೆ. ಆ ತರ ಮಾಡಬೇಕಾದರೆ ಏನು ಹೇಳ್ತಾರೆ ಅಂತಂದ್ರೆ ನನ್ನ ಗಂಡನಿಂದ ಆಗಲಿ, ನಿಮ್ಮ ಅತ್ತೆಯಿಂದ ಆಗಲಿ, ನಮ್ಮ ಮಾವನಿಂದ ಆಗಲಿ, ನನ್ನ ಮಕ್ಕಳಿಂದ ಆಗಲಿ ಯಾವುದೇ ಕಷ್ಟ ಆದ್ರೂ ಪರವಾಗಿಲ್ಲ. ನನಗೆ ಇದೆಲ್ಲವನ್ನು ಬಿಟ್ಟು ಸ್ವರ್ಗ ಸಿಗುತ್ತೆ ಅನ್ನೋದಾದ್ರೆ ಸವತಿ ಮಾತ್ರ ನನಗೆ ಸಿಗಬಾರದು, ಸ್ವರ್ಗ ಕೂಡ ನನಗೆ ಬೇಡ ಅಂತ ಹೇಳಿ. ಅಂತರಾರ್ಥ ಏನು ಅಂತ ಅಂದ್ರೆ ಯಾವ ಹೆಂಗಸಿಗೆ ತನ್ನ ಗಂಡ ಬೇರೆ ರೀತಿಯಾದಂತಹ ಕುಪಥಗಾಮಿಯಾಗಿ ಬೇರೆ ಹೆಣ್ಣು ಮಕ್ಕಳೊಂದಿಗೆ ಅಶಾಸ್ತ್ರೀಯವಾದ, ಅನ್ಯಾಯವಾದ, ಅಧರ್ಮದಿಂದ ಸಂಬಂಧವನ್ನು ಹೊಂದಬಾರದು, ತಪ್ಪಿಸಿಕೊಳ್ಳಬೇಕು, ಜೀವನದಲ್ಲಿ ಆ ತರದ ಕಣ್ಣೆತ್ತಿ ಕೂಡ ಬೇರೆ ಯಾರನ್ನು ಆ ದೃಷ್ಟಿಯಿಂದ ನೋಡಬಾರದು ಅಂತ ಇದ್ದರೆ, ಅಂತ ಹೆಣ್ಣು ಮಕ್ಕಳು ಸ್ವರ್ಣಗೌರವ್ರತದ ಆಚರಣೆಯನ್ನು ಮಾಡಬೇಕು ಅಂತ ಹಿರಿಯರು ಹೇಳ್ತಾರೆ. ಆ ರೀತಿ ಮಾಡಿದ್ದೇ ಆದರೆ ಪತಿವ್ರತೆ ಬರೀ ಹೆಂಗಸರಲ್ಲ, ಗಂಡಸರು ಕೂಡ ಪತ್ನಿವ್ರತರಾಗಬೇಕು, ಅಂತಹ ಪತ್ನಿವ್ರತತ್ವವನ್ನು ಗಂಡನಿಗೆ ಮಾಡಿಸತಕ್ಕಂತಹ ಅದ್ಭುತವಾದ ಶಕ್ತಿ ನೋಡಿ, ಈ ಸ್ವರ್ಣಗೌರಿ ಪೂಜೆಯಲ್ಲಿದೆ. ಆದ್ದರಿಂದ ಆ ಜಗದಂಬಿಕೆಯ ಸರ್ವಮಂಗಳ ಅಂತ ಹೆಸರು. ದುಡ್ಡು ಕಾಸು ಇಲ್ಲದಿದ್ದರೆ ಒಂದೇ ಇದ್ದರೆ ಆಗೋದಿಲ್ಲ. ಸ್ವರ್ಗ ಸುಖ ಇದ್ದರೂ ಉಪಯೋಗ ಇಲ್ಲ. ಗಂಡ ಆದ್ರೆ ಎರಡು ಮೂರು ಜನರನ್ನು ಕಟ್ಟಿಕೊಂಡರೆ ಏನಾಗೋಗುತ್ತೆ, ಏನಾಗಿದೆ ಅಂತಕ್ಕಂತದ್ದು ಸಮಾಜಕ್ಕೆ ಗೊತ್ತಿದೆ. ಅಲ್ಲವೇ, ಅದು ನ್ಯಾಯಬದ್ಧವಾಗಿಯೂ ಧರ್ಮಬದ್ಧವಾಗಿಯೂ ಇಲ್ಲದೆ ಇರತಕ್ಕಂತದ್ದು ಇಹದಲ್ಲೂ ಪರದಲ್ಲೂ ಎರಡು ದೊಡ್ಡ ತೊಂದರೆಯನ್ನು ತಂದುಕೊಡತಕ್ಕಂತದ್ದಾಗಿ ಅನುಭವದಲ್ಲೂ ಮತ್ತು ದೇಹಾನಂತರದಲ್ಲೂ ಕೂಡ ನಮಗೆ ಕಾಣುತ್ತೆ. ಆದ್ದರಿಂದ ಪತಿಗೆ ಅತ್ಯಂತ ಪ್ರೀತಿಪಾತ್ರರಾಗಬೇಕು, ನಮಗೆ ಸೌಭಾಗ್ಯ ಇರಬೇಕು, ಮುತ್ತೈದೆತನ ಉಳಿಯಬೇಕು ಅಂತ ಒಂದು ಇಂಗಿತದಿಂದ ಈ ಸ್ವರ್ಣಗೌರಿ ವ್ರತದ ಒಂದು ಪೂಜೆಯನ್ನು ಮಾಡತಕ್ಕಂತದ್ದು ಮಾಡ್ತಾ ಬಂದರೆ ಅವರ ಜೀವನವು, ದಾಂಪತ್ಯವು, ಕುಟುಂಬವು ಅತ್ಯಂತ ಸುಖದಿಂದಲೂ, ಶಾಂತಿಯಿಂದಲೂ, ಸೌಭಾಗ್ಯದಿಂದಲೂ ಕೂಡುತ್ತೆ. ಅಂತಹ ಅಮ್ಮನ ವ್ರತವನ್ನು ಎಲ್ಲರೂ ಮಾಡಿ ಪುನೀತರಾಗಿ, ಸಮಸ್ತ ಸನ್ಮಂಗಳಾನಿ ಭವಂತು.